Sheikh Hasina Resigned: ಪ್ರಧಾನಿ ಸ್ಥಾನಕ್ಕೆ ಶೇಖ್ ಹಸೀನಾ ರಾಜೀನಾಮೆ! ಬಾಂಗ್ಲಾದೇಶ ತೊರೆದು ಸುರಕ್ಷಿತ ಸ್ಥಳಕ್ಕೆ ಪಲಾಯನ

 



ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶ ಬಿಟ್ಟು ಪರಾರಿ!


ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿ ಹಿಂಸಾಚಾರ ಭುಗಿಲೆದ್ದಿದೆ. ಈ ನಡುವೆ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ. ಅಲ್ಲದೇ, ಅವರು ‘ಸುರಕ್ಷಿತ ಸ್ಥಳ’ಕ್ಕಾಗಿ ಢಾಕಾ ಅರಮನೆ ತೊರೆದಿದ್ದಾರೆ ಎಂದು ವರದಿಯಾಗಿದೆ.

ಬಾಂಗ್ಲಾ ದೇಶದಾದ್ಯಂತ ಹಿಂಸಾಚಾರ ಮಿತಿ ಮೀರಿದ್ದು 300ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಹೀಗಾಗಿ ಭದ್ರತೆಯ ದೃಷ್ಠಿಯಿಂದ ಶೇಖ್ ಹಸೀನಾ ಸುರಕ್ಷಿತ ಸ್ಥಳಕ್ಕೆ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಸುರಕ್ಷಿತ ಸ್ಥಳಕ್ಕೆ ತೆರಳುವ ಮುನ್ನ ಶೇಖ್ ಹಸೀನಾ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ವರದಿಯಾಗಿತ್ತು. ಜೊತೆಯಲ್ಲೇ ತಮ್ಮ ಭಾಷಣವನ್ನು ಧ್ವನಿ ಮುದ್ರಣ ಮಾಡುತ್ತಾರೆ ಎಂದೂ ಹೇಳಲಾಗಿತ್ತು. ಆದರೆ, ಇದಾವುದಕ್ಕೂ ಶೇಖ್ ಹಸೀನಾ ಅವರಿಗೆ ಅವಕಾಶ ಸಿಗಲೇ ಇಲ್ಲ ಎಂದು ತಿಳಿದು ಬಂದಿದೆ.

 ಬಾಂಗ್ಲಾದಲ್ಲಿ ಹಿಂಸಾಚಾರ ಹೆಚ್ಚುತ್ತಿರುವ ಕಾರಣ ಶೇಖ್ ಹಸೀನಾ ರಾಜೀನಾಮೆ ನೀಡಿದ್ದು, ಹೀಗಾಗಿ ದೇಶದಲ್ಲಿ ಸೇನಾಡಳಿತ ಜಾರಿಯಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಬಾಂಗ್ಲಾ ದೇಶದ ಮಾಧ್ಯಮಗಳು ವರದಿ ಮಾಡುತ್ತಿವೆ. ಆದರೆ, ವಾಸ್ತವಾಂಶದ ಬಗ್ಗೆ ತಿಳಿದಿಲ್ಲ. ಶೇಖ್ ಹಸೀನಾ ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿಯೂ ಲಭ್ಯವಾಗಿಲ್ಲ.

ಸರ್ಕಾರ ಹಾಗೂ ಶೇಖ್ ಹಸೀನಾ ಬೆಂಬಲಿಗರು ಹಾಗೂ ವಿರೋಧಿಗಳ ನಡುವೆ ಹೊಡೆದಾಟ ನಡೆಯುತ್ತಿದೆ. ಢಾಕಾದ ಶಹಭಾಗ್ ವೃತ್ತ ಸೇರಿದಂತೆ ಹಲವೆಡೆ ಎರಡೂ ಕಡೆಯವರು ಹೊಡೆದಾಡಿದ್ದಾರೆ. ಪೊಲೀಸರು ಅಶ್ರುವಾಯು ಹಾಗೂ ರಬ್ಬರ್ ಬುಲೆಟ್‌ಗಳನ್ನ ಸಿಡಿಸಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸ ನಡೆಸಿದರು.ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದ ಪ್ರತಿಭಟನಾಕಾರರು ಭಾನುವಾರ(ಆ.4) ಬೀದಿಗಿಳಿದಿದ್ದರು. ಇದಕ್ಕೂ ಮೊದಲು ಒಂದೆರಡು ದಿನಗಳ ಕಾಲ ಬಾಂಗ್ಲಾ ಪ್ರಶಾಂತ ಸ್ಥಿತಿಯಲ್ಲೇ ಇತ್ತು. ಸ್ವಾತಂತ್ರ್ಯ ಹೋರಾಟಗಾರರ ಮೀಸಲಾತಿ ಪ್ರಮಾಣವನ್ನ ಬಾಂಗ್ಲಾ ದೇಶ ಸುಪ್ರೀಂ ಕೋರ್ಟ್‌ ಶೇ. 30 ರಿಂದ ಶೇ. 5ಕ್ಕೆ ಇಳಿಸಿದ್ದರಿಂದ ತಣ್ಣಗಾಗಿತ್ತು. ಆದರೆ, ಬಾಂಗ್ಲಾ ಪ್ರಧಾನಿ ವಿರುದ್ಧ ಬೀದಿಗಿಳಿದ ಪ್ರತಿಭಟನಾಕಾರರು, ರಾಜೀನಾಮೆಗೆ ಆಗ್ರಹಿಸಿ ಹಿಂಸಾಚಾರಕ್ಕೆ ಮುಂದಾಗಿದ್ದು, ದೇಶವೇ ಹೊತ್ತಿ ಉರಿಯುತ್ತಿದೆ.



ನವೀನ ಹಳೆಯದು
WhatsApp Join our 'Shan Media News' WhatsApp group - Join Now ×