ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಯು.ಟಿ ಖಾದರ್‌ಗೆ ಸಿಎಂ ಸ್ಥಾನ????


ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷ ಆಗ್ರಹಿಸುತ್ತಿದೆ. ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ಮಾಡುತ್ತಿದೆ.

ಈ ನಡುವೆ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಬಂದರೆ, ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಸಿಎಂ ಸ್ಥಾನ‌ ಒಲಿದುಬರುವ ಸಾಧ್ಯತೆ ಇದೆ ಎಂಬ ಸುದ್ದಿ ಹಬ್ಬಿದೆ.

ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದರೆ, ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಎದುರಾಗಬಹುದು. ಈ ವೇಳೆ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ‌ ಸ್ಥಾನ ನೀಡಲು ಸಿದ್ದರಾಮಯ್ಯ ಒಪ್ಪುವುದು ಕಷ್ಟವಾಗಬಹುದು. ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡದಂತೆ ಸಿದ್ದರಾಮಯ್ಯ ಹಠ ಹಿಡಿದರೆ, ಹೈಕಮಾಂಡ್ ಮುಂದೆ ಹಿರಿಯ ಸಚಿವರಾದ ಜಿ. ಪರಮೇಶ್ವರ್, ಹೆಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್ ಅಥವಾ ಯು.ಟಿ. ಖಾದರ್ ಅವರ ಹೆಸರು ಪ್ರಸ್ತಾಪವಾಗಬಹುದು. ಅವರಲ್ಲಿ‌ ಒಬ್ಬರಿಗೆ ಸಿಎಂ‌ ಸ್ಥಾನ ಒಲಿಯಬಹುದು ಎಂಬ ವಿಶ್ಲೇಷಣೆ ನಡೆಯುತ್ತಿದೆ.

ಈ ನಾಲ್ವರಲ್ಲಿ ಜಿ.ಪರಮೇಶ್ವರ್, ಹೆಚ್.ಕೆ. ಪಾಟೀಲ್‌ ಮತ್ತು ಎಂ.ಬಿ. ಪಾಟೀಲರಿಗೆ ಒಂದೊಂದು ಬಣದಿಂದ ವಿರೋಧ ವ್ಯಕ್ತವಾಗಬಹುದು. ಪರಮೇಶ್ವರ್ ಆಯ್ಕೆಗೆ ಸಿದ್ದರಾಮಯ್ಯ ಬಣ ವಿರೋಧಿಸಿದರೆ, ಹೆಚ್.ಕೆ. ಪಾಟೀಲ್‌ ಮತ್ತು‌ ಎಂ.ಬಿ. ಪಾಟೀಲ್‌ ಅವರ ಆಯ್ಕೆಗೆ ಡಿ.ಕೆ. ಶಿವಕುಮಾರ್ ಬಣ ವಿರೋಧಿಸಬಹುದು. ಈ ಹಿನ್ನೆಲೆಯಲ್ಲಿ, ಎರಡೂ ಬಣಗಳ ಜೊತೆ ಉತ್ತಮ‌ ಸಂಬಂಧ ಹೊಂದಿರುವ ಯು.ಟಿ. ಖಾದರ್ ಅವರು ಸಿಎಂ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಯಾಗಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರೊಂದಿಗೆ ಯು.ಟಿ. ಖಾದರ್ ಉತ್ತಮ ಸಂಬಂಧ ಹೊಂದಿದ್ದು, ಹೆಚ್ಚಿನ ಕಾಂಗ್ರೆಸ್ ಶಾಸಕರ ಜೊತೆಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಅಲ್ಲದೆ, ಯು.ಟಿ. ಖಾದರ್ ಅವರಿಗೆ ಆಡಳಿತದ ಅನುಭವವಿದೆ. ಐದು‌ ಬಾರಿ ಶಾಸಕರಾಗಿ, ಎರಡು‌ ಬಾರಿ ಸಚಿವರಾಗಿ ವಿವಿಧ ಖಾತೆಗಳನ್ನು ನಿಭಾಯಿಸಿರುವ ಅವರು ಸದ್ಯಕ್ಕೆ ವಿಧಾನಸಭಾಧ್ಯಕ್ಷರಾಗಿದ್ದಾರೆ.

ಯುವ.ಟಿ. ಖಾದರ್ ಅವರು ಸಿಎಂ ಆಗಲು ಅವಕಾಶ ದೊರೆತರೆ, ಅವರು ಕರ್ನಾಟಕದ ಮೊದಲ‌ ಮುಸ್ಲಿಂ ಮುಖ್ಯಮಂತ್ರಿ‌ ಆಗಲಿದ್ದಾರೆ. ದಕ್ಷಿಣ ಭಾರತ ರಾಜ್ಯಗಳ ಮೊದಲ ಮುಸ್ಲಿಂ‌ ಸಿಎಂ ಎಂಬ ಖ್ಯಾತಿಯೂ ಅವರಿಗೆ ದೊರೆಯಲಿದೆ. ಸದ್ಯಕ್ಕೆ, ಸಿಎಂ‌ ಸಿದ್ದರಾಮಯ್ಯ ರಾಜೀನಾಮೆ ನೀಡುವ ಸಾಧ್ಯತೆ ಕಾಣಿಸುತ್ತಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ‌ ಸಿಎಂ‌ ಬದಲಾವಣೆಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಯು.ಟಿ. ಖಾದರ್ ಅವರ ಹೆಸರು ಮುನ್ನಲೆಗೆ ಬಂದಿದೆ. 
ನವೀನ ಹಳೆಯದು
WhatsApp Join our 'Shan Media News' WhatsApp group - Join Now ×