ಉಪ್ಪಿನಂಗಡಿ: ನಾಗರಿಕ ಹಿತರಕ್ಷಣಾ ವೇದಿಕೆ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ ಅಸಂವಿಧಾನಿಕ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ, ತಕ್ಷಣವೇ ಹಿಂಪಡೆಯುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಸಮಾವೇಶ ಏಪ್ರಿಲ್ 15 ಮಂಗಳವಾರ ಸಂಜೆ 4 ಗಂಟೆಗೆ ಇಂಡಿಯನ್ ಸ್ಕೂಲ್ ಬಳಿ ನಡೆಯಲಿದೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಹಮ್ಮದ್ ಹಾಜಿ ನೆಕ್ಕಿಲಾಡಿ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಸಂವಿಧಾನ ಬದ್ಧವಾಗಿ, ಶಾಂತಿಯುತವಾದ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ.
ಈ ಪ್ರತಿಭಟನಾ ಸಮಾವೇಶದಲ್ಲಿ ಉಪ್ಪಿನಂಗಡಿ ಪರಿಸರದ ಹಲವಾರು ಮಸೀದಿ, ಮದ್ರಸ, ಸಂಘಸಂಸ್ಥೆಯ, ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಸ್ಲಿಂ ಸಮುದಾಯದ ಉಲೇಮಾಗಳು, ಮತ ಪಂಡಿತರು, ಸಮುದಾಯದ ನಾಯಕರು, ಸಾಮಾಜಿಕ ಕಾರ್ಯಕರ್ತರು ಹಾಗೂ ಚಿಂತಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಮುಸ್ಲಿಂ ಸಮುದಾಯ ಈ ಅಸಂವಿಧಾನಿಕ ಕಾಯಿದೆಯನ್ನು ಸಂಪೂರ್ಣವಾಗಿ ವಿರೋಧಿಸುತ್ತದೆ ಎಂಬ ಸಂದೇಶವನ್ನು ಕೇಂದ್ರ ಸರಕಾರಕ್ಕೆ ಮುಟ್ಟಿಸಲಿದ್ದೇವೆ ಎಂದರು.
ಪ್ರತಿಭಟನಾ ಸಭೆಯಲ್ಲಿ ಸುಧೀರ್ ಕುಮಾರ್ ಮರೋಳ್ಳಿ, ಮುನೀರ್ ಕಾಟಿಪಳ್ಳ, ಅನ್ವರ್ ಸಾದತ್ ಬಜತ್ತೂರು, ಇಸ್ಲಾಕ್ ಪುತ್ತೂರು, ಅಬ್ದುಲ್ ರಶೀದ್ ಝೈನಿ ಇಕ್ಬಾಲ್ ಬಾಳಿಲ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
