ಬಂಟ್ವಾಳ ಪುರಸಭೆ ಕಾಂಗ್ರೆಸ್ ಎಸ್.ಡಿ.ಪಿ.ಐ ಮೈತ್ರಿ ಸಾಧ್ಯತೆ…. ಮೈತ್ರಿ ಪಕ್ಷದೊಳಗೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ

 


ಬಂಟ್ವಾಳ ಪುರಸಭೆಗೆ ಎರಡನೇ ಅವಧಿಗೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದೆ, ಚುನಾವಣೆಗೂ ದಿನ ನಿಗದಿಯಾಗಿದ್ದು, ಅಗಸ್ಟ್ 22 ರಂದು ಗುರುವಾರ ನಡೆಯಲಿದೆ ಎಂದು ಚುನಾವಣಾ ಇಲಾಖೆ ಪ್ರಕಟ ಮಾಡಿದೆ.


ಕುತೂಹಲ ಕೆರಳಿಸುವ ಬಂಟ್ವಾಳ ಪುರಸಭೆ


ಪ್ರತಿ ಚುನಾವಣೆಯಲ್ಲಿ ಕೂಡ ಬಂಟ್ವಾಳ ವಿಧಾನಸಭಾ ಕ್ಷೇತ್ರ ಅತ್ಯಂತ ಸ್ಪರ್ಧಾತ್ಮಕ ಮತ್ತು ಕುತೂಹಲ ಮೂಡಿಸುವ ಮೂಲಕ ಕೊನೆ ಕ್ಷಣದವರೆಗೂ ಜನಪ್ರತಿನಿಧಿಗಳ ಎದೆಯ ಡವಡವ ನಡುಕ ಹುಟ್ಟಿಸುತ್ತದೆ.

ಪ್ರಸ್ತುತ ಪುರಸಭಾ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನದ ಆಯ್ಕೆ ಸಾಕಷ್ಟು ಕುತೂಹಲ ಕೆರಳಿಸಿದೆ. ಯಾರಾಗುತ್ತಾರೆ ಎಂಬುದೇ ಯಾರಿಗೂ ತಿಳಿಯದ ವಿಚಾರವಾಗಿ ಕಗ್ಗಂಟಾಗಿದೆ.


ಬಿಜೆಪಿ – ಕಾಂಗ್ರೆಸ್ ಬಲಾಬಲ


ಬಂಟ್ವಾಳ ಪುರಸಭೆಯಲ್ಲಿ ಒಟ್ಡು 27 ಚುನಾಯಿತ ಅಭ್ಯರ್ಥಿಗಳು ಸದಸ್ಯರಾಗಿದ್ದಾರೆ. ಬಿಜೆಪಿಯಿಂದ 11 ಸದಸ್ಯರು, ಕಾಂಗ್ರೇಸ್ ನಿಂದ 12 ಸದಸ್ಯರು ಹಾಗೂ ಎಸ್.ಡಿ.ಪಿ.ಪಕ್ಷದ 4 ಸದಸ್ಯರು ಚುನಾವಣೆಯಲ್ಲಿ ಗೆಲುವು ಸಾಧಿಸಿ ಸದಸ್ಯರಾಗಿದ್ದಾರೆ. ಪ್ರಥಮ ಅವಧಿಯಲ್ಲಿ ಕಾಂಗ್ರೆಸ್ ಮತ್ತು ಎಸ್.ಡಿ.ಪಕ್ಷದ ಹೊಂದಾಣಿಕೆಯಿಂದ ಕಾಂಗ್ರೆಸ್ ಪಕ್ಷದ ಸದಸ್ಯ ಮಹಮ್ಮದ್ ಶರೀಫ್ ಅವರು ಅಧ್ಯಕ್ಷರಾಗಿ ಹಾಗೂ ಜೆಸಿಂತಾ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಇದೀಗ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮೀಸಲಾತಿ ಪ್ರಕಟವಾಗಿದೆ.

ಮೀಸಲಾತಿ ಪ್ರಕಟವಾದ ಕೂಡಲೇ ಅಕಾಂಕ್ಷಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸದಸ್ಯರುಗಳು ಕಸರತ್ತು ನಡೆಸುತ್ತಿದ್ದು, ಪಕ್ಷದ ಕಚೇರಿಯಲ್ಲಿ ಪುರಸಭಾ ಸದಸ್ಯರುಗಳು ತಮ್ಮ ಬೆಂಬಲಿಗರ ಜೊತೆ ದೌಡಾಯಿಸಿ ಬಲ ಪ್ರದರ್ಶನಗಳು ನಡೆಯುತ್ತಿದೆ.

ಕೇವಲ 1 ವರ್ಷ 2 ತಿಂಗಳ ಕಾಲ ಅಧ್ಯಕ್ಷ ಸ್ಥಾನದ ಅವಧಿ ಸಿಗುವುದು ಎಂದು ಗೊತ್ತಿದ್ದರೂ ಪ್ರತಿಷ್ಠೆಯ ಹುದ್ದೆಯನ್ನು ಬಿಟ್ಟು ಕೊಡಲು ಮೂರು ಪಕ್ಷದ ಅಭ್ಯರ್ಥಿಗಳು ತಯಾರಿಲ್ಲ.

ಕಳೆದ ಸಂಸದ ಚುನಾವಣೆ ಸಂದರ್ಭ ಕಾಂಗ್ರೇಸ್ ಸದಸ್ಯ ಗಂಗಾಧರ ಪೂಜಾರಿ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರ್ಪಡಗೊಂಡ ಹಿನ್ನಲೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರುಗಳು ಸಮಬಲ ಸಾಧಿಸಿದ್ದಾರೆ. ರಾಜಿನಾಮೆ ನೀಡಿದ್ದರಿಂದ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಕಾಂಗ್ರೆಸ್ ‌- ಬಿಜೆಪಿ 11 ಸದಸ್ಯರುಗಳನ್ನು ಹೊಂದಿದರೆ,ಎಸ್.ಡಿ.ಪಿ.ಐ 4 ಸದಸ್ಯರುಗಳಿಗೆ ಯಥಾಸ್ಥಿತಿ ಕಾಯ್ದಕೊಂಡು ನಿರ್ಣಾಯಕ ಸ್ಥಾನದಲ್ಲಿ ಮಿಂಚುತಿದೆ.


ಎಸ್.ಡಿ.ಪಿ.ಪಕ್ಷ ನಿರ್ಣಾಯಕ

ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲದ ಸದಸ್ಯರುಗಳನ್ನು ಹೊಂದಿದ್ದರು ಕೂಡ ಬಿಜೆಪಿಗೆ ಒಬ್ಬರು ಶಾಸಕಹಾಗೂ ಸಂಸದರ ಮತ ಸಿಗುವ ಕಾರಣಕ್ಕೆ 13 ಮತಗಳು ಸಿಗುತ್ತದೆ. ಆದರೆ ಕಳೆದ ಬಾರಿಯಂತೆ ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಹೊಂದಾಣಿಕೆ ಮಾಡಿದರೆ ಬಹುತೇಕ ಕಾಂಗ್ರೆಸ್ ಅಧಿಕಾರವನ್ನು ಪಡೆಯುವುದು ಗ್ಯಾರಂಟಿ. ಕಾಂಗ್ರೆಸ್ ಗೆ ಎಸ್.ಡಿ.ಪಿ.ಸಪೋರ್ಟ್ ಮಾಡಿದರೆ 15 ಮತಗಳು ಸಿಗುವುದು ನಿಶ್ಚಿತ.

ಒಂದು ವೇಳೆ ಎಸ್.ಡಿ.ಪಿ.ಕೂಡ ಸ್ವತಂತ್ರವಾಗಿ ಸ್ಪರ್ಧೆ ಮಾಡಿದರೆ ಮಾತ್ರ ‌ಬಿಜೆಪಿಗೆ ಲಾಭವಾಗಬಹುದು. ಇ ಸಾಧ್ಯತೆಗಳು ಬಲು ಕಡಿಮೆ.


ಅಧ್ಯಕ್ಷ ಸ್ಥಾನ ನಮಗೆ ನೀಡಿ: ಎಸ್.ಡಿ.ಪಿ.ಐ


ಕಳೆದ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಅಧ್ಯಕ್ಷ ಪಟ್ಟದಲ್ಲಿ ಕುಳ್ಳಿರಿಸಿದ ಸಾಲದಲ್ಲಿರುವ ಕಾಂಗ್ರೆಸ್ ಈ ಬಾರಿ ಎಸ್.ಡಿ.ಪಿ.ಐ.ಪಕ್ಷದ ಅಭ್ಯರ್ಥಿಯನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಬೇಕು ಎಂಬುದು ಎಸ್.ಡಿ.ಪಿ.ಐ ಪಕ್ಷದ ಒತ್ತಾಯ. ನಾವು ಸಹಕಾರ ನೀಡಿದ್ದೇವೆ ಈ ಬಾರಿ ನಮಗೂ ಅವಕಾಶ ನೀಡಿ ,ನಾವು ಆಕಾಂಕ್ಷಿಗಳೇ ಎಂಬ ಮಾತನ್ನು ಅವರು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆದರೆ ಕಾಂಗ್ರೆಸ್ ಇದಕ್ಕೆ ಸಮ್ಮತಿ ನೀಡುವುದು ಬಹುತೇಕ ಕಡಿಮೆ, ಹಾಗಿದ್ದರೂ ಉಪಾಧ್ಯಕ್ಷ ಸ್ಥಾನವನ್ನು ಎಸ್.ಡಿ.ಪಿ.ಐ.ಗೆ ಕೊಡಬೇಕು ಎಂಬುದು ಅವರ ಬೇಡಿಕೆಯಂತೆ. ಆದರೆ ಈ ಬೇಡಿಕೆಯನ್ನು ಪೂರೈಸಲು ಕಾಂಗ್ರೆಸ್ ತಯಾರಿದೆಯಾ ಎಂಬುದು ಸದ್ಯ ಗೊತ್ತಾಗದ ವಿಚಾರ.


ಬಿಜೆಪಿ- ಕಾಂಗ್ರೆಸ್ ನಿಂದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಯಾರು ಯಾರು?

ಹಿರಿಯ ಸದಸ್ಯರಾಗಿರುವ ವಾಸು ಪೂಜಾರಿ ಅವರ ಹೆಸರು ಮುಂಚೂಣಿಯಲ್ಲಿರುವ ಬೆನ್ನಲ್ಲೇ ಮತ್ತೊರ್ವ ಹಿರಿಯ ಕಾಂಗ್ರೇಸಿಗ ಜನಾರ್ಧನ ಚೆಂಡ್ತಿಮಾರ್ ಅವರ ಹೆಸರು ಚಾಲ್ತಿಯಲ್ಲಿದೆ. ಆದರೆ ಇವರಿಬ್ಬರ ನಡುವೆ ಯುವ ನಾಯಕ ಅಬುಬಕ್ಕರ್ ಸಿದ್ದೀಕ್ ಗುಡ್ಡೆಯಂಗಡಿ ಅವರ ಹೆಸರು ಕೇಳಿ ಬಂದಿದ್ದು ಮೂವರ ಪೈಕಿ ಯಾರು ಅವಕಾಶ ಪಡೆಯುತ್ತಾರೆ ಎಂಬುದು ಗೌಪ್ಯ. ಅ. 20 ರಂದು ಕಾಂಗ್ರೆಸ್ ಆಂತರಿಕ ಸಭೆ ನಡೆಯಲಿದ್ದು, ಬ್ಲಾಕ್ ಕಾಂಗ್ರೆಸ್ ನ ಪದಾಧಿಕಾರಿಗಳು ಹಾಗೂ ಹಿರಿಯ ನಾಯಕರು ಒಮ್ಮತದ ತೀರ್ಮಾನ ತೆಗೆದುಕೊಳ್ಳುವ ಮೂಲಕ ಓರ್ವ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ. ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗದಂತೆ ಎಲ್ಲ ಸದಸ್ಯರ ಒಮ್ಮತದ ಅಭಿಪ್ರಾಯ ಪಡೆದು ಅಭ್ಯರ್ಥಿ ಆಯ್ಕೆಗೆ ಮುಂದಾಗಿದೆ ಎಂದು ಹೇಳಲಾಗಿದೆ.

ಎಸ್.ಡಿ.ಪಿ.ಐ‌.ಪಕ್ಷದಿಂದ ಇದ್ರೀಶ್ ಪಾಣೆಮಂಗಳೂರು ಅವರನ್ಜು ಅಧ್ಯಕ್ಷ ಅಥವಾ ಉಪಾಧ್ಯಕ್ಷ ಎರಡು ಸ್ಥಾನಕ್ಕೆ ಕಣಕ್ಕೆ ಇಳಿಸುವ ಸಾಧ್ಯತೆ ಇವೆ.

‌ಬಿಜೆಪಿಯಿಂದ ಕಳೆದ ಬಾರಿ ಮತ್ತು ಈ ಬಾರಿ ಎ.ಗೋವಿಂದ ಪ್ರಭು ಅವರ ಒಬ್ಬರ ಹೆಸರೇ ಅಧ್ಯಕ್ಷ ಸ್ಥಾನದ ಸ್ಪರ್ಧೆಯ ಲಿಸ್ಟ್ ನಲ್ಲಿದೆ,ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಹರಿಪ್ರಸಾದ್ ಅವರ ಹೆಸರು ಬಿಜೆಪಿ ವಲಯದಲ್ಲಿ ಹೇಳಲಾಗುತ್ತಿದೆ.

ಆದರೆ ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ.ಪಕ್ಷ ಕಳೆದ ಬಾರಿಯಂತೆ ಈ ಬಾರಿಯೂ ಹೊಂದಾಣಿಕೆ ಮಾಡಿಕೊಳ್ಳುವ ಅವಕಾಶಗಳೇ ಜಾಸ್ತಿಯಿರುವುದರಿಂದ ಬಿಜೆಪಿ ಪಾಲಿಗೆ ಅದೃಷ್ಟ ಒಲಿಯುವುದು ಬಹುತೇಕ ಕಷ್ಡ.ಆದರೆ ರಾಜಕೀಯದಲ್ಲಿ ಕೊನೆ ಕ್ಷಣದವರೆಗೂ ಕುತೂಹಲ ಭರಿತ ಸಂಗತಿಗಳು ನಡೆಯುತ್ತವೆ. ಹಾಗಾಗಿ ಯಾವ ಪಕ್ಷದ ಸದಸ್ಯರು ಕೂಡ ಅಧ್ಯಕ್ಷರಾಗಿ ಆಯ್ಕೆಯಾಗಬಹುದು…



ನವೀನ ಹಳೆಯದು
WhatsApp Join our 'Shan Media News' WhatsApp group - Join Now ×