ಉತ್ತರ ಪ್ರದೇಶ ಆದಿತ್ಯನಾಥ್ ಸರಕಾರದ ಸೋನಂ ಚಿಸ್ತಿ ರಾಜ್ಯ ಸಚಿವರ ಸ್ಥಾನಮಾನ ಹೊಂದಿದ ರಾಜೀನಾಮೆ ತೃತೀಯ ಲಿಂಗಿಗಳ ಕಲ್ಯಾಣ ಮಂಡಳಿ

ಸೋನಮ್ ಚಿಸ್ತಿ

 ಲಕ್ನೊ: ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತೋರಿರುವ ಕಳಪೆ ಪ್ರದರ್ಶನದ ಹೊಣೆ ಹೊತ್ತು ಉತ್ತರ ಪ್ರದೇಶದ ರಾಜ್ಯ ದರ್ಜೆಯ ಸಚಿವೆ ಸೋನಮ್ ಚಿಸ್ತಿ ಅವರು ಉತ್ತರ ಪ್ರದೇಶ ತೃತೀಯಲಿಂಗಿಗಳ ಕಲ್ಯಾಣ ಮಂಡಳಿಯ ಉಪಾಧ್ಯಕ್ಷೆ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನಾನು ಬಿಜೆಪಿಯ ಪರವಾಗಿ ಜನರನ್ನು ತಲುಪಲು ವಿಫಲವಾಗಿರುವುದರಿಂದ, ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದು, ಪಕ್ಷದ ಸಂಘಟನೆಯನ್ನು ಬಲಪಡಿಸಲು ದುಡಿಯಲಿದ್ದೇನೆ ಎಂದು ಅವರು ಹೇಳಿದ್ದಾರೆ.

ಈ ಕುರಿತು Times Now ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಸಚಿವೆ ಸೋನಮ್ ಚಿಸ್ತಿ, ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ನಿಕಟವಾಗಿರುವ ಅಧಿಕಾರಿಗಳ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಕಳೆದ ಮೂರು ವರ್ಷಗಳಿಂದ ಸರಕಾರದಲ್ಲಿ ಯಾರೂ ನನ್ನ ಮಾತು ಕೇಳುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ನನ್ನನ್ನು ಹಾಗೂ ಮುಖ್ಯಮಂತ್ರಿ ಆದಿತ್ಯನಾಥ್ ನೀಡಿದ ಸೂಚನೆಗಳನ್ನು ಅಧಿಕಾರಿಗಳು ನಿರ್ಲಕ್ಷಿಸುತ್ತಾ ಬರುತ್ತಿದ್ದಾರೆ" ಎಂದು ಅರೋಪಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಗಿ ಬಿಜೆಪಿ ತೋರಿದ ಕಳಪೆ ಪ್ರದರ್ಶನದ ಹೊಣೆಯನ್ನು ಪಕ್ಷದಲ್ಲಿ ಯಾರೂ ಹೊರಲು ಸಿದ್ಧರಿಲ್ಲ. ಹೀಗಾಗಿ, ಓರ್ವ ತೃತೀಯಲಿಂಗಿಯಾಗಿ ನಾನು ಆ ಹೊಣೆಯನ್ನು ಹೊರುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಕಳಪೆ ಪ್ರದರ್ಶನ ತೋರಿರುವ ಬೆನ್ನಿಗೇ, ಮುಖ್ಯಮಂತ್ರಿ ಆದಿತ್ಯನಾಥ್ ಕಾರ್ಯವೈಖರಿಯ ವಿರುದ್ಧ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದೆ. ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರಂತೂ ಆದಿತ್ಯನಾಥ್ ವಿರುದ್ಧ ಬಹಿರಂಗ ಬಂಡಾಯ ಸಾರಿದ್ದು, ದಿಲ್ಲಿಗೆ ತೆರಳಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ‌.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾರೊಂದಿಗೆ ಗುಪ್ತ ಸಮಾಲೋಚನೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ತೋರಿರುವ ಕಳಪೆ ಪ್ರದರ್ಶನದ ನೈತಿಕ ಹೊಣೆಯನ್ನು ಮುಖ್ಯಮಂತ್ರಿ ಆದಿತ್ಯನಾಥ್ ತಲೆಗೆ ಕಟ್ಟಲೆಂದೇ ಸಚಿವೆ ಸೊನಮ್ ಚಿಸ್ತಿ ಅವರಿಂದ ಬಿಜೆಪಿಯ ವರಿಷ್ಠರು ರಾಜೀನಾಮೆ ಕೊಡಿಸಿರಬಹುದು ಎಂದೂ ವಿಶ್ಲೇಷಿಸಲಾಗುತ್ತಿದೆ.

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×