ಮಂಗಳೂರು: ಮಂಗಳೂರಿನ ಮುಖ್ಯ ರಸ್ತೆಯಲ್ಲಿ ನಮಾಝ್ ಮಾಡಿ ವಾಹನಗಳ ಓಡಾಟ ಮತ್ತು ಜನ ಸಂಚಾರಕ್ಕೆ ಅಡಚಣೆಯನ್ನು ಮಾಡಿದರೆಂಬ ಮಾಧ್ಯಮ ವರದಿ ಸಂಪೂರ್ಣ ಸತ್ಯವಲ್ಲ. ಕಂಕನಾಡಿ ಎಂಬಲ್ಲಿನ ಮಸೀದಿಯಲ್ಲಿ ಶುಕ್ರವಾರದ ಜುಮ್ಮಾ ನಮಾಝ್ ಗೆ ತಡವಾಗಿ ಬಂದವರು ಮಸೀದಿಯಲ್ಲಿ ಸ್ಥಳಾವಕಾಶ ಇಲ್ಲದ ಕಾರಣಕ್ಕೆ ಒಟ್ಟು ಹನ್ನೆರಡು ಮಂದಿ ರಸ್ತೆ ಯಲ್ಲಿ ನಮಾಝ್ ನಿರ್ವಹಿಸಿದ್ದರು. ಮಾಧ್ಯಮದಲ್ಲಿ ಹೇಳಿರುವಂತೆ ಈ ರಸ್ತೆಯು ಕಂಕನಾಡಿಯ ಮುಖ್ಯ ರಸ್ತೆಯಲ್ಲ, ಶುಕ್ರವಾರ ಮಧ್ಯಾಹ್ನ ನಮಾಝ್ ಸಮಯದಲ್ಲಷ್ಟೇ ಈ ರಸ್ತೆಯಲ್ಲಿ ವಾಹನ ಮತ್ತು ಜನರ ಸಂಖ್ಯೆ ಕಂಡು ಬರುತ್ತವೆ. ಈ ಪ್ರದೇಶದಲ್ಲಿ ಮುಸ್ಲಿಮರ ಮನೆಗಳೇ ಬಹುತೇಕ. ಎರಡು ನಿಮಿಷದಲ್ಲಿ ಮುಗಿದು ಬಿಡುವ, ಹನ್ನೆರಡು ಮಂದಿಯ ನಮಾಝ್ ನಿರ್ವಹಣೆಯಿಂದ ರಸ್ತೆ ಬ್ಲಾಕ್ ಆಯಿತು ಎನ್ನುವ ಆರೋಪ ಹಾಸ್ಯಾಸ್ಪದ. ಮುಸ್ಲಿಂ ದ್ವೇಷದಿಂದ ಯಾರೋ ಅನಾ
ಮಿಕರು ಚಿತ್ರೀಕರಣ ಮಾಡಿದ ವರದಿಯ ಸತ್ಯಾಂಶ ಪರಾಂಬರಿಸದೆ ಕೆಲವು ಮಾಧ್ಯಮಗಳು ಉಪ್ಪು-ಖಾರ ಸೇರಿಸಿ ಮುಸ್ಲಿಮೇತರರನ್ನು ಕೆರಳಿಸುವಂತೆ ವರದಿ ಮಾಡಿವೆ, ಪೋಲಿಸ್ ಇಲಾಖೆ ಇದರ ಪೂರ್ಣ ವಿವರ ಮನದಟ್ಟು ಮಾಡಿ ಕೊಳ್ಳದೆ ನಮಾಝ್ ನಿರತರ ಮೇಲೆ ಸ್ವಯಂ ಪ್ರೇರಿತ ಕೇಸು ದಾಖಲಿಸಿರುವುದು ಸಂಶಯಿಸುವಂತಾಗಿದೆ.ಆದ್ದರಿಂದ ಕರ್ನಾಟಕ ಸರ್ಕಾರದ ಗೃಹ ಸಚಿವರಾದ ತಾವು(ಡಾಕ್ಟರ್ ಜಿ.ಪರಮೇಶ್ವರರು) ಕೂಡಲೇ ಈ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಿ, ಅಮಾಯಕರ ಮೇಲಾದ ತಪ್ಪು ಕ್ರಮವನ್ನು ಸರಿಪಡಿಸುವಂತೆ ಕೆಪಿಸಿಸಿ ಪ್ರಚಾರ ಸಮಿತಿ ಸಂಯೋಜಕ ಫಾರೂಕ್ ಉಳ್ಳಾಲ್ ಗೃಹ ಸಚಿವರಲ್ಲಿ ವಿನಂತಿಸಿದ್ದಾರೆ.
