ಚಿಕ್ಕಮಗಳೂರು : ಬಸ್ ಹತ್ತುವ ವೇಳೆ ಡೋರ್ ಲಾಕ್ ಕಟ್ ಆದ ಪರಿಣಾಮ ಮಹಿಳೆಯೊಬ್ಬರು ಬಸ್ ನಿಂದ ನೆಲಕ್ಕೆ ಉರುಳಿ ಬಿದ್ದ ಘಟನೆ ಚಿಕ್ಕಮಗಳೂರು ತಾಲೂಕಿನ ಐದಳ್ಳಿ ಗ್ರಾಮದ ಬಳಿ ನಡೆದಿದೆ.
ಚಿಕ್ಕಮಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಈ ಘಟನೆ ನಡೆದಿದ್ದು, ಬಾಳೆಹೊನ್ನೂರಿಗೆ ತೆರಳಲು ಮಹಿಳೆ ಬಸ್ ಹತ್ತುವಾಗ ಈ ಘಟನೆ ನಡೆದಿದೆ.
ಬಸ್ಸಿನಿಂದ ಕೆಳಗೆ ಬಿದ್ದ ಮಹಿಳೆಯನ್ನು ಶಕುಂತಲಮ್ಮ ಎಂದು ಗುರುತಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನು ಆಲ್ದೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೆಎಸ್ ಆರ್ ಟಿಸಿ ಬಸ್ ನ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಈ ಘಟನೆ ನಡೆದಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಯಿತು.


