ಉತ್ತರ ಕನ್ನಡ : ರಾಜ್ಯಾದ್ಯಂತ ಮುಂಗಾರು ಅಬ್ಬರ ಜೋರಾಗಿದ್ದು, ಅದರಲ್ಲೂ ಕರಾವಳಿ ಭಾಗದಲ್ಲಂತೂ ವರುಣದೇವನ ಆರ್ಭಟದಿಂದ ಹಲವು ಅವಾಂತರಗಳು ಸೃಷ್ಟಿಯಾಗುತ್ತಿವೆ.
ಈ ಹಿನ್ನೆಲೆಯಲ್ಲಿ ನಾಳೆ ಕೂಡ ಭಾರೀ ವರ್ಷಧಾರೆ ಆಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಈ ಹಿನ್ನೆಲೆಯಲ್ಲಿ ವಿವಿಧ ತಾಲೂಕುಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲಾ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಜಿಲ್ಲೆಯ ಕಾರವಾರ, ಕುಮಟಾ, ಅಂಕೋಲ, ಭಟ್ಕಳ ತಾಲೂಕು & ಹೊನ್ನಾವರ ತಾಲೂಕಿನ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ ಘೋಷಣೆ ಮಾಡಿ ಜಿಲ್ಲಾಡಳಿತ ಆದೇಶಿಸಿದೆ. ಹೀಗಾಗಿ ನಾಳೆಯೂ ರಜೆ ಮುಂದುವರಿಯಲಿದೆ ಎಂದು ಡಿಸಿ ಲಕ್ಷ್ಮಿಪ್ರಿಯ ತಿಳಿಸಿದ್ದಾರೆ.
ಕಾವೇರಿ ಜಲಾನಯನ ಪ್ರದೇಶಗಳಲ್ಲಿಯೂ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಎಲ್ಲಾ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಶಿವಮೊಗ್ಗ, ಉಡುಪಿಯಲ್ಲಿಯೂ ಸಹ ಭಾರೀ ಮಳೆ ಸುರಿಯುತ್ತಿದ್ದು, ಹಲವೆಡೆ ಗೋಡೆ ಕುಸಿತದಂತದ ಘಟನೆಗಳು ಸಂಭವಿಸಿದೆ.
ಮಂಡ್ಯದ ಕೃಷ್ಣ ರಾಜ ಸಾಗರ ಜಲಾಶಯದಲ್ಲಿ ನೀರಿನ ಮಟ್ಟ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ನಾಳೆ ವಿ.ಸಿ ನಾಲೆಗೆ ನೀರು ಹೊರಬಿಡಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗೆ ನೇತ್ರಾವತಿ ನದಿಪಾತ್ರ ತುಂಬಿ ಹರಿಯುತ್ತಿದ್ದು, ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಉಳಿದಂತೆ ಬೆಳಗಾವಿ ಮಲಪ್ರಭಾ ನದಿಯೂ ಸಹ ತುಂಬಿ ಹರಿಯುತ್ತಿದೆ.
