ಉಪ್ಪಿನಂಗಡಿ: ಇಲ್ಲಿನ ಕುಮಾರಧಾರ ನದಿಯ ಹಳೆ ಸೇತುವೆಯ ಮೇಲೆ ನದಿಗೆ ಇಣುಕುವವರು, ಸೆಲ್ಫಿ ತೆಗೆಯುವವರು, ಗಾಳ ಹಾಕುವವರು ಹೆಚ್ಚಾಗಿದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ದ.ಕ. ಜಿಲ್ಲಾಧಿಕಾರಿ ಆದೇಶದಂತೆ ಈ ಸೇತುವೆಯ ಮೇಲೆ ಜನಸಂಚಾರ ಹಾಗೂ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ಸೇತುವೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ ತಡೆಯನ್ನು ಅಳವಡಿಸಲಾಗಿದೆ.
Read more :- School Holiday: ಎಡೆಬಿಡದೆ ಸುರಿಯುತ್ತಿರುವ ಮಳೆ; ನಾಳೆ ಉಡುಪಿಯ 3 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ ಘೋಷಣೆ
ಬ್ರಿಟಿಷರ ಕಾಲದ ಈ ಸೇತುವೆಯು ಹಳೆಯದಾಗಿರುವುದರಿಂದ ಹಲವು ವರ್ಷಗಳ ಹಿಂದೆ ಇದಕ್ಕೆ ಪರ್ಯಾಯವಾಗಿ ಇನ್ನೊಂದು ಸೇತುವೆಯನ್ನು ನಿರ್ಮಿಸಲಾಗಿತ್ತು. ಕಬ್ಬಿಣದ ಈ ಸೇತುವೆಯ ತಡೆ ಬೇಲಿಯ ಕಬ್ಬಿಣದ ಸರಳುಗಳು ಈ ಹಿಂದೆಯೇ ಕಳ್ಳರ ಪಾಲಾಗಿತ್ತು. ತೆಗೆಯಲು ಕಷ್ಟ ಸಾಧ್ಯವಾಗಿರುವಂತದ್ದು ಮಾತ್ರ ಈ ಸೇತುವೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಆದರೂ ಈ ಸೇತುವೆಯಲ್ಲಿ ದ್ವಿಚಕ್ರ ವಾಹನಗಳು, ರಿಕ್ಷಾ, ಕಾರುಗಳು ಸಂಚರಿಸುತ್ತಿದ್ದವು. ಕತ್ತಲಾಗುತ್ತಿದ್ದಂತೆಯೇ ನದಿಗೆ ಗಾಳ ಹಾಕುವವರು ಇಲ್ಲಿ ಜಮಾಯಿಸುತ್ತಿದ್ದರು. ಅಲ್ಲದೇ, ಈ ಸೇತುವೆಯ ಮೇಲೆ ನಿಂತು ನದಿ ನೀರನ್ನು ನೋಡುವುದು. ಸೆಲ್ಫಿ ತೆಗೆಯುವುದು ಹೆಚ್ಚಾಗ ತೊಡಗಿತ್ತು. ಇದರ ಕಬ್ಬಿಣದ ಸರಳುಗಳ ತಡೆಬೇಲಿಯನ್ನು ಕಳ್ಳರು ಅಲ್ಲಲ್ಲಿ ಕಿತ್ತಿದ್ದರಿಂದ ಸಂಭಾವ್ಯ ಅಪಾಯದ ಸಾಧ್ಯತೆಯೂ ಹೆಚ್ಚಾಗಿತ್ತು.
