ಶಾಲೆಗೆ ಬರುವಾಗ ಜಡೆ ಹಾಕಿಕೊಂಡು ಬಂದಿಲ್ಲ, ಶಿಸ್ತು ಪಾಲನೆ ಮಾಡುತ್ತಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಶಿಕ್ಷಕರು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಅಮಾನವೀಯ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.
ಎಂಟನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಮೂಲ್ಯ, ಅನುಷಾ, ಭಾವನ ಶಿಕ್ಷಕರಿಂದ ಜಡೆ ಕಟ್ ಮಾಡಿಸಿಕೊಂಡು ಶಿಕ್ಷೆ ಅನುಭವಿಸಿದ ವಿದ್ಯಾರ್ಥಿನಿಯರು.
ಜಡೆ ಹಾಕಿಕೊಂಡು ಶಾಲೆಗೆ ಬಾರದ್ದಕ್ಕೆ ದೈಹಿಕ ಶಿಕ್ಷಕ ಶಿವಕುಮಾರ್ ಆದೇಶದಂತೆ ಸಹ ಶಿಕ್ಷಕಿ ಪವಿತ್ರಾ ಅವರು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ವಿದ್ಯಾರ್ಥಿನಿಯರು ಶಾಲೆಯಿಂದ ಮನೆಗೆ ಹೋದಾಗ ಕೂದಲು ಕತ್ತರಿಸಿರುವುದು ಗಮನಿಸಿದ ಪೋಷಕರು, ವಿದ್ಯಾರ್ಥಿನಿಯರನ್ನು ವಿಚಾರಿಸಿದಾಗ ಶಾಲೆಯಲ್ಲಿ ನಡೆದ ಘಟನೆ ಬಗ್ಗೆ ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪೋಷಕರು ಶಾಲೆಗೆ ಬಂದು ಗಲಾಟೆ ಮಾಡಿದ್ದಾರೆ.
ಶುಕ್ರವಾರ ( ಜು 26 ) ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಾಲೆಯಲ್ಲಿ ಶನಿವಾರವೂ ಬಿಗುವಿನ ವಾತಾವರಣ ವಿದ್ದು, ವಿಷಯ ತಿಳಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿನಿಯರು ಹಾಗೂ ಶಾಲೆಯ ಇತರ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದಿದ್ದಾರೆ.
ಇನ್ನು ಗಲಾಟೆ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಅಕ್ಕೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
