ಕೊಲ್ಲೂರು: ಇಲ್ಲಿನ ಸೊಸೈಟಿಗುಡ್ಡೆಯಲ್ಲಿ ಗುಡ್ಡ ಕುಸಿದು ಅಲ್ಲಿನ ನಿವಾಸಿಯೋರ್ವರ ಮನೆಕೆಲಸದಾಕೆ ಮಣ್ಣಿನಡಿ ಸಿಲುಕಿ ಮೃತಪಟ್ಟ ಘಟನೆ ಸಂಭವಿಸಿದೆ.
ಮೃತ ಮಹಿಳೆ ಹಳ್ಳಿಬೇರು ನಿವಾಸಿ ಅಂಬಾ (55) ಎಂದು ತಿಳಿದು ಬಂದಿದೆ.
ಅಂಬಾ ಅವರು ಕೊಲ್ಲೂರು ಗ್ರಾ.ಪಂ.ಮಾಜಿ ಅಧ್ಯಕ್ಷ ವಿಶ್ವನಾಥ ಅಡಿಗರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಜು.4ರಂದು ಮಧ್ಯಾಹ್ನ ಪಾತ್ರೆ ತೊಳೆಯಲೆಂದು ಮನೆಯ ಹಿಂಭಾಗಕ್ಕೆ ತೆರಳಿದ್ದಾಗ ಗುಡ್ಡ ಕುಸಿದು ಬಿದ್ದಿದೆ ಎಂದು ತಿಳಿದು ಬಂದಿದೆ.
ಅಂಬಾ ಅವರ ಶರೀರದ ಮಕ್ಕಾಲು ಭಾಗವು ಮಣ್ಣಿನ ಅಡಿಯಲ್ಲಿ ಹೂತುಹೋಗಿದ್ದು, ಕುತ್ತಿಗೆಯ ಭಾಗ ಮಾತ್ರ ಕಾಣುತ್ತಿತ್ತು ಎಂದು ತಿಳಿದು ಬಂದಿದೆ.
ಕೂಡಲೇ ಸ್ಥಳೀಯರು ಸೇರಿ ಮಹಿಳೆಯನ್ನು ರಕ್ಷಿಸಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಗುಡ್ಡ ಕುಸಿತದಿಂದ ಮನೆಯ ಹಿಂಭಾಗವೂ ಜಖಂಗೊಂಡಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಕುಂದಾಪುರ ಉಪಕಮಿಷನರ್ ರಶ್ಮಿ, ಬೈಂದೂರು ತಹಶೀಲ್ದಾರ್ ಪ್ರದೀಪ್, ಸ್ಥಳೀಯ ಪಂಚಾಯತ್ ಪ್ರತಿನಿಧಿಗಳು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
