ಯಾವುದೇ ಕ್ಷಣದಲ್ಲಾದರೂ ಅಮೆರಿಕ ದಿವಾಳಿಯಾಗಲಿದೆ ; ಎಲಾನ್‌ ಮಸ್ಕ್‌ ಭವಿಷ್ಯ



ವಾಷಿಂಗ್ಟನ್‌,ಜು.26- ವಿಶ್ವದ ಶ್ರೀಮಂತ ರಾಷ್ಟ್ರ ಎಂದು ಬೀಗುತ್ತಿರುವ ಅಮೆರಿಕ ಯಾವುದೇ ಕ್ಷಣದಲ್ಲಾದರೂ ದಿವಾಳಿಯಾಗಬಹುದು ಎಂದು ಖ್ಯಾತ ಉದ್ಯಮಿ ಎಲಾನ್‌ ಮಸ್ಕ್‌ ಭವಿಷ್ಯ ನುಡಿದಿದ್ದಾರೆ.ಅಮೆರಿಕ ಎಂದರೆ ಜಗತ್ತಿನ ಅತ್ಯಂತ ಶ್ರೀಮಂತ ದೇಶ ಎಂದೇ ಗುರುತಾಗಿದೆ.


ಆದರೆ, ಜಗತ್ತಿನಲ್ಲಿ ಅತಿ ಹೆಚ್ಚು ಸಾಲಗಾರ ದೇಶ ಯಾವುದಾದರೂ ಇದ್ದರೆ ಅದು ಅಮೆರಿಕವೇ.


ಸಾಲಗಳ ಮೇಲೆ ನಿಂತಿರುವ ಅಮೆರಿಕದ ಆರ್ಥಿಕತೆ ಯಾವಾಗ ಬೇಕಾದರೂ ಕುಸಿಯಬಹುದು ಎಂದು ಕೆಲ ಆರ್ಥಿಕ ತಜ್ಞರು ಈ ಹಿಂದೆ ಎಚ್ಚರಿಕೆ ನೀಡಿದ್ದರು.ಅವರ ಎಚ್ಚರಿಕೆ ಬೆನ್ನಲ್ಲೇ ಎಕ್‌್ಸ ಪ್ಲಾಟ್‌‍ಫಾರ್ಮ್‌ನ ಮಾಲಿಕ ಎಲಾನ್‌ ಮಸ್ಕ್‌ ಅವರು ಅಮೆರಿಕ ಈಗ ದಿವಾಳಿ ಆಗುತ್ತಿದೆ ಎಂದು ತಮ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ.


ಅಮೆರಿಕದ ಸಾಲಕ್ಕೆ ಕಟ್ಟಬೇಕಿರುವ ಹಣಕ್ಕೆ ಶೇ. 76ರಷ್ಟು ಆದಾಯ ತೆರಿಗೆ ಸಂಗ್ರಹ ಬೇಕಾಗುತ್ತದೆ ಎನ್ನುವ ಪೋಸ್ಟ್‌ ವೊಂದಕ್ಕೆ ಮಸ್ಕ್‌ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಅಮೆರಿಕದ ಸೆಂಟ್ರಲ್‌ ಬ್ಯಾಂಕ್‌‍ನ ಜೂನ್‌ ತಿಂಗಳ ದತ್ತಾಂಶವನ್ನು ಆಧಾರವಾಗಿಟ್ಟುಕೊಂಡು ಅವರು ಅಮೆರಿಕದ ಸಾಲ ಎಷ್ಟಿದೆ ಎನ್ನುವುದನ್ನು ತುಲನೆ ಮಾಡಿದರೆ. ಸರ್ಕಾರ ಒಂದು ವರ್ಷದಲ್ಲಿ ಕಲೆಹಾಕುವ ಆದಾಯ ತೆರಿಗೆ ಹಣದಲ್ಲಿ ಶೇ. 76ರಷ್ಟು ಮೊತ್ತವು ಅಮೆರಿಕದ ರಾಷ್ಟ್ರೀಯ ಸಾಲಕ್ಕೆ ಬಡ್ಡಿ ಕಟ್ಟಲು ಮಾತ್ರ ಸಾಕಾಗುತ್ತದೆ ಎಂದು ಕೆಲ ದಿನಗಳ ಹಿಂದೆ ಆರ್ಥಿಕ ತಜ್ಞ ಇ.ಜೆ. ಆಂಟೋನಿ ಅವರ ಲೇಖನ ಪ್ರಕಟವಾಗಿತ್ತು.


ವೈಯಕ್ತಿಕ ಆದಾಯ ತೆರಿಗೆಯು ಅಮೆರಿಕ ಸರ್ಕಾರದ ಅತಿದೊಡ್ಡ ಆದಾಯ ಮೂಲವಾಗಿದೆ. ಇದರ ಮುಕ್ಕಾಲು ಪಾಲು ಆದಾಯವು ಬಡ್ಡಿಕಟ್ಟುವುದರಲ್ಲೇ ಮುಗಿದುಹೋಗುತ್ತದೆ. ಸಂಸತ್‌ಗೆ ಇದು ಗೊತ್ತಿದೆಯಾ? ಗೊತ್ತಿದ್ದರೂ ಅವರಿಗೆ ಏನಾದರೂ ಅನಿಸುತ್ತದಾ ಎಂದು ಆಂಟೋನಿ ತಮ ಲೇಖನದಲ್ಲಿ ಪ್ರಶ್ನಿಸಿದ್ದರು.


ಈ ವರದಿ ಪ್ರಕಾರ ಅಮೆರಿಕದ ರಾಷ್ಟ್ರೀಯ ಸಾಲಕ್ಕೆ ಕಟ್ಟಬೇಕಾದ ಬಡ್ಡಿ ಹಣ ಈ ವರ್ಷ 1.14 ಟ್ರಿಲಿಯನ್‌ ಡಾಲರ್‌ ಆಗಬಹುದು. ಅಂದರೆ 95 ಲಕ್ಷ ಕೋಟಿ ರುಪಾಯಿಯಷ್ಟು ಹಣ ಅದು. ಅಂದರೆ ಭಾರತದ ಬಜೆಟ್‌‍ನ ಎರಡು ಪಟ್ಟು ಹಣವು ಅಮೆರಿಕ ತನ್ನ ಸಾಲಕ್ಕೆ ಬಡ್ಡಿ ಕಟ್ಟಲು ಬಳಸುತ್ತದೆ ಎಂದರೆ ಊಹಿಸಿ ನೋಡಿ.


ಬಡ್ಡಿಯೇ ಅಷ್ಟು, ಸಾಲ ಇನ್ನೆಷ್ಟು?

ಅಮೆರಿಕದಲ್ಲಿ ಸಾಲಕ್ಕೆ ಕಟ್ಟಬೇಕಾದ ಬಡ್ಡಿಹಣವೇ 1.14 ಟ್ರಿಲಿಯನ್‌ ಡಾಲರ್‌ ಎಂದಿದೆ. ಇತ್ತೀಚಿನ ಮಾಹಿತಿ ಪ್ರಕಾರ ಅಮೆರಿಕದ ರಾಷ್ಟ್ರೀಯ ಸಾಲ ಬರೋಬ್ಬರಿ 35 ಟ್ರಿಲಿಯನ್‌ ಡಾಲರ್‌ ಹತ್ತಿರವಿದೆ. ಭಾರತದ ಜಿಡಿಪಿಗಿಂತ ಇದು ಹತ್ತು ಪಟ್ಟು ಹೆಚ್ಚು ಎನ್ನುವುದು ವಿಶೇಷವಾಗಿದೆ.

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×