ಉಳ್ಳಾಲ : ಮಸೀದಿಗಳಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹವಿದೆ'ಎಂದು ಹೇಳಿಕೆ ನೀಡಿರುವ ಶಾಸಕ ಹರೀಶ್ ಪೂಂಜಾರನ್ನು ಕೂಡಲೇ ಬಂಧಿಸಿ ತನಿಖೆಗೊಳಪಡಿಸ ಬೇಕೆಂದು ಮಂಗಳೂರು ಪೋಲಿಸ್ ಕಮೀಷನರ್ ರಲ್ಲಿ
ಉಳ್ಳಾಲ ಮೇಲಂಗಡಿ ಮೊಹಲ್ಲದ ಮುಸ್ಲಿಂ ನಾಗರಿಕರ ಪರವಾಗಿ ಸಾಮಾಜಿಕ ನೇತಾರ ಫಾರೂಕ್ ಉಳ್ಳಾಲ್, ಮೇಲಂಗಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ ಹಾಗೂ ಮಸೀದಿಯ ಮುಖ್ಯ ಗುರುಗಳಾದ ಮೌಲಾನ ಮುಹಮ್ಮದ್ ಅಲಿ ಮದನಿಯವರ ನೇತೃತ್ವದಲ್ಲಿ ನಿಯೋಗ ತೆರಳಿ, ಲಿಖಿತ ಮನವಿ ಸಲ್ಲಿಸಿ, ಆಗ್ರಹಿಸಲಾಯಿತು.
ಕಮೀಷನರ್ ಸಾಹೇಬರೊಂದಿಗೆ ಈ ಕುರಿತು ವಿಸ್ತೃತವಾಗಿ ವಿವರಿಸಿ ಮಾತನಾಡಿದ ಫಾರೂಕ್ ಉಳ್ಳಾಲ್ ಮತ್ತು ಮುಸ್ತಫಾ ಅಬ್ದುಲ್ಲಾ ರವರು 'ಬಿಜೆಪಿ ಶಾಸಕರಾದ ಹರೀಶ್ ಪೂಂಜಾರವರು ಪದೇ ಪದೇ ಮುಸ್ಲಿಮರನ್ನು ಅವಹೇಳನ ಮಾಡುವ, ಜನಸಾಮಾನ್ಯರಲ್ಲಿ ಮುಸ್ಲಿಂ ದ್ವೇಷ ತುಂಬುವ, ಮುಸ್ಲಿಮರ ಬಗ್ಗೆ ಅಪನಂಬಿಕೆ ಮೂಡಿಸುವ ಸಲುವಾಗಿ ಪದೇ ಪದೇ ಮುಸ್ಲಿಂ ಸಮಾಜದ ವಿರುದ್ಧ ಸುಳ್ಳಾರೋಪವನ್ನು ಹೊರಿಸುತ್ತಲೇ ಬಂದಿದ್ದಾರೆ. ಅವರ ಮೇಲೆ ಕಾನೂನು ಜರುಗದೇ ಇರುವುದರಿಂದ ಈ ಬಾರಿ ಮುಸ್ಲಿಮರ ಆರಾಧನಾ ಕೇಂದ್ರವಾದ ಮಸೀದಿಗಳ ವಿರುದ್ಧವೇ ತನ್ನ ಹೀನ ನಾಲಿಗೆ ಯನ್ನು ಹರಿಯ ಬಿಟ್ಟಿದ್ದಾರೆ. ಹರೀಶ ಪೂಂಜರ ಸುಳ್ಳಾರೋಪದ ಜೊತೆಗೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ, ಶರಣ್ ಪಂಪ್ ವೆಲ್ ಮತ್ತಿತರರು ಕೂಡಾ ಮುಸ್ಲಿಂ ಮನುಸ್ಸುಗಳನ್ನು ಘಾಸಿಗೊಳಿಸುವ ಪ್ರಯತ್ನಕ್ಕೆ ಇಳಿದಿದ್ದಾರೆ.
ಪೋಲಿಸರು ಕೋಮುವಾದಿ ನಾಯಕರ ಪ್ರಚೋದನಾತ್ಮಕ ಹೇಳಿಕೆಗಳ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳದೇ ಲಘುವಾಗಿ ಪರಿಗಣಿಸುವುದರಿಂದಲೇ ಹರೀಶ್ ಪೂಂಜಾ, ಶರಣ್ ಪಂಪ್ ವೆಲ್ ರಂತಹ ಮುಸ್ಲಿಂ ದ್ವೇಷದ ಆಟಾಟೋಪ ಅಂಕೆ ಮೀರುತ್ತದೆ ಎಂದು ಮುಸ್ಲಿಂ ಸಮಾಜ ಭಾವಿಸಿ ಕೊಳ್ಳುವಂತಾಗಿದೆ. ಪೋಲಿಸ್ ಠಾಣೆಗಳಲ್ಲಿ ಮುಸ್ಲಿಮರಿಗೆ ನ್ಯಾಯ ಸಿಗುತ್ತಿಲ್ಲ ಎಂಬ ನೋವು ಮುಸ್ಲಿಮರಲ್ಲಿ ಜಿಲ್ಲಾದ್ಯಂತ ಮನೆ ಮಾಡಿವೆ. ಪೋಲಿಸ್ ವರಿಷ್ಠಾಧಿಕಾರಿಯಾಗಿರುವ ತಾವು ದಯವಿಟ್ಟು ಈ ಬಗ್ಗೆ ಸತ್ಯಾನ್ವೇಷಣೆ ನಡೆಸಿ ಮುಸ್ಲಿಂ ಸಮಾಜದ ಕಳಕಳಿಗೆ ಸ್ಪಂದಿಸ ಬೇಕು ಎಂದು ಮನವಿ ಮಾಡಿಕೊಂಡರು.
ಕಮೀಷನರ್ ಸಾಹೇಬರು ನಿಯೋಗದ ಹೇಳಿಕೆಗೆ ಯುಕ್ತವಾಗಿ ನ್ಯಾಯ ನೀಡುವ ಭರವಸೆಯನ್ನು ನೀಡಿದರು.
ನಿಯೋಗದಲ್ಲಿ ಪ್ರಮುಖರಾದ ನಝೀರ್ ಬಾರ್ಲಿ,ಹೊಸಪಳ್ಳಿಆಡಳಿತ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಅದ್ದಾಮ, ಪ್ರ.ಕಾರ್ಯದರ್ಶಿ ಮೊಹಿಯುದ್ದೀನ್, ಆಡಳಿತ ಸಮಿತಿಯ ಪ್ರಮುಖರಾದ ರಹ್ಮಾನ್ ಹಳೇಕೋಟೆ, ಕಬೀರ್ ಬುಖಾರಿ, ಸವ್ವಾದ್ ಅಬ್ದುಲ್ಲಾ, ಮುಹಿಯುದ್ದೀನ್ ಗುಂಡಿಹಿತ್ಲು, ಹುಸೈನ್ ಮಿಲ್ಲತ್ ಮುಂತಾದವರು ಉಪಸ್ಥಿತರಿದ್ದರು.
