✍️ರಫೀಉದ್ದೀನ್ ಕುದ್ರೋಳಿ
*ಇಂದು 2024 ರ ಲೋಕಸಭಾ ಚುನಾವಣೆಯ ಫಲಿತಾಂಶ. ಮೋದಿಯವರು ಮರಳಿ ಅಧಿಕಾರಕ್ಕೆ ಬರುತ್ತಾರೆ ಮತ್ತು ಪ್ರಚಂಡ ಬಹುಮತ ಗಳಿಸುತ್ತಾರೆ ಎಂಬ ಸೂಚನೆಯನ್ನು ಈ ದೇಶದ ಬಹುತೇಕ ರಾಷ್ಟ್ರೀಯ ಮಾಧ್ಯಮಗಳು ನೀಡಿದೆ. ವಿಪಕ್ಷ ಈ ಬಾರಿ ಮೊದಲಿಗಿಂತಲೂ ಹೆಚ್ಚು ಶಕ್ತವಾಗಿ ವಿರೋಧ ಪಕ್ಷದ ಹೊಣೆಗಾರಿಕೆಯನ್ನು I.N.D.I.A ಎಂಬ ಹೆಸರಿನಲ್ಲಿ ಪೂರೈಸಿದೆ. ಮಾತ್ರವಲ್ಲ ಆಡಳಿತ ವರ್ಗದ ಪ್ರತಿಯೊಂದು ಸವಾಲಿಗೂ ದಿಟ್ಟ ಉತ್ತರವನ್ನು ಮತ್ತು ಪ್ರಬಲ ಪ್ರತಿರೋಧವನ್ನು ತೋರಿದೆ. ಫಲಿತಾಂಶ ಏನೇ ಆಗಿರಲಿ ಆದರೆ ದೇಶದಲ್ಲಿ ಪ್ರಶ್ನಿಸುವವರು ಇದ್ದಾರೆ ಮತ್ತು ಪ್ರಶ್ನಿಸಬೇಕಾದ ರೀತಿಯಲ್ಲಿ ಪ್ರಶ್ನಿಸುತ್ತಾರೆ ಎಂಬ ಸಂದೇಶವನ್ನು ಈ ಚುನಾವಣೆ ಒದಗಿಸಿ ಕೊಟ್ಟಿರುವುದು ಈ ದೇಶ ಸಂವಿಧಾನ ಮತ್ತು ದೇಶದ ಸಮಗ್ರತೆ ಅಖಂಡತೆಯನ್ನು ಸಂರಕ್ಷಿಸಲ್ಪಡಬೇಕು ಎಂದು ಬಯಸುವವರಿಗೆ ತುಸು ಸಮಾಧಾನ ತರಿಸಿದೆ.*
ಇಷ್ಟರ ತನಕ ದೇಶದ ನಾಗರಿಕರು ಎಲ್ಲವನ್ನು ಸಹಿಸಿಕೊಳ್ಳುತ್ತಿದ್ದರು ಎಂಬ ಭ್ರಮೆಯಲ್ಲಿದ್ದ ಅನೇಕ ರಾಜಕೀಯ ಪಕ್ಷ ಹಾಗು ರಾಷ್ಟ್ರೀಯ ಚಾನೆಲ್ ಗಳಿಗೆ ಈ ಬಾರಿ ಇಲ್ಲಿಯ ನಾಗರಿಕರು ಮತ್ತು ಪ್ರಜೆಗಳು ತೋರಿದ ಪ್ರತಿರೋಧ ಮತ್ತು ಪ್ರತಿ ಸವಾಲು ಅವರನ್ನು ದಂಗುಬಡಿಸಿದೆ. ಇದು ಮುಂದಿನ ದಿನಗಳಲ್ಲಿ ಯಾರೇ ಅಧಿಕಾರಕ್ಕೆ ಬಂದರು ನಾವು ಅಷ್ಟು ಸುರಕ್ಷಿತರಲ್ಲ, ಒಂದು ವೇಳೆ ನಾವು ಘೋಷಿಸಿದ ಘೋಷಣೆಗಳನ್ನು ಕಾರ್ಯರೂಪಕ್ಕೆ ತರದಿದ್ದರೆ ಮುಂದಿನ ದಿನಗಳಲ್ಲಿ ನಮಗೆ ಸಂಚಕಾರವಿದೆ ಎಂಬ ಸಂದೇಶ ಕೂಡ ಈ ಚುನಾವಣೆಯ ಮೂಲಕ ಲಭಿಸಿದೆ ಇದು ಪ್ರಜಾಪ್ರಭುತ್ವದ ಅತಿ ದೊಡ್ಡ ಗೆಲುವು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.
ಫಲಿತಾಂಶ ಏನೇ ಆಗಿರಲಿ, ಯಾರೇ ಅಧಿಕಾರಕ್ಕೆ ಬರಲಿ ಆದರೆ ಈ ದೇಶಕಟ್ಟುವ ಕನಸು ಕಂಡಿರು ಅನೇಕ ಹಿತೈಷಿಗಳು ಮುಂದಿನ ದಿನಗಳಲ್ಲಿ ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಲು ಒಂದು ಸೂಕ್ತ ವೇದಿಕೆಯನ್ನು ಕಂಡುಕೊಂಡಿದ್ದಾರೆ ಎಂಬುದು ರಾಜಕೀಯ ರಂಗದಲ್ಲೂ ಮತ್ತು ರಾಜಕೀಯೇತರ ರಂಗದಲ್ಲಿ ಚರ್ಚೆಗೊಂಡಿರುವುದೇ ಅತಿ ದೊಡ್ಡ ವಿಚಾರ.
ನಮ್ಮಲ್ಲಿ ದೇಶದ ಸಂವಿಧಾನವಿದೆ. ಈ ದೇಶದ ಸಂವಿಧಾನ ಕಲ್ಪಿಸಿರುವ ಮೀಸಲಾತಿಗಳು ಧಾರ್ಮಿಕ ಸ್ವಾತಂತ್ರ್ಯ , ವಾಕ್ ಸ್ವಾತಂತ್ರ್ಯ ಮುಂತಾದ ನಾಗರಿಕ ಹಕ್ಕುಗಳನ್ನು ಸಂರಕ್ಷಿಸಲು ನಾವು ಬದ್ಧರಾಗಬೇಕು. ಮತ್ತು ಈ ನಿಟ್ಟಿನಲ್ಲಿ ನಾವು ಸಂಘಟಿತರಾಗಬೇಕು. ರಾಜಕೀಯವಾಗಿ ಅಧಿಕಾರವನ್ನು ಗಳಿಸಬಹುದು ಆದರೆ ಸಾಮಾಜಿಕವಾಗಿ ನಮ್ಮ ಹಕ್ಕುಗಳು ಸಂರಕ್ಷಿಸಲ್ಪಟ್ಟಾಗ ಹಾಗು ನೀಡಲ್ಪಟ್ಟ ದಿನವೇ ನಾವು ಸ್ವತಂತ್ರ ಗೊಳ್ಳುತ್ತೇವೆ. ಅದುವೇ ನಿಜವಾದ ಪ್ರಜಾಪ್ರಭುತ್ವ ಎಂದು ಪರಿಗಣಿಸಲ್ಪಡುತ್ತದೆ.
ದೇಶದಲ್ಲಿ ರಾಜಕೀಯ ಪಕ್ಷಗಳು ಎಷ್ಟೇ ಅಧಿಕಾರ ನಡೆಸಿದರೂ ಈ ದೇಶದ ನಾಗರಿಕರಿಗೆ ಸಿಗಬೇಕಾದ ಹಕ್ಕು ಲಭಿಸದಿದ್ದರೆ ಅದನ್ನು ಸುದೃಢ ಪ್ರಜಾಪ್ರಭುತ್ವ ಎಂದು ಹೇಳಲು ಸಾಧ್ಯವಿಲ್ಲ ಆದ್ದರಿಂದ ಪ್ರಜಾಪ್ರಭುತ್ವ ಉಳಿಯ ಬೇಕಾದರೆ ಸಂವಿಧಾನ ಉಳಿಯಬೇಕು ಮತ್ತು ಸಂವಿಧಾನ ಉಳಿದಾಗ ಮಾತ್ರ ಈ ದೇಶದ ಪ್ರತಿ ನಾಗರಿಕನ ಹಕ್ಕು ಸಂರಕ್ಷಿಸಲ್ಪಡುತ್ತದೆ ಈ ನಿಟ್ಟಿನಲ್ಲಿ ಈ ಚುನಾವಣೆ ಹೊಸ ಭರವಸೆಯನ್ನು ಮೂಡಿಸಿದೆ. ಇದುವೇ ನಿಜವಾದ ವಿಜಯ
