ದೆಹಲಿ: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಪೂರ್ವ ಮುಂಗಾರು ಚುರುಕಾಗಿದೆ. ಕಳೆದ ಹತ್ತು ದಿನದಿಂದ ಕರ್ನಾಟಕದ ಹದಿನೈದಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಲೇ ಇದೆ.
ಬೆಂಗಳೂರು, ಮೈಸೂರು, ಬೆಳಗಾವಿ, ಧಾರವಾಡ, ಹಾಸನ, ಕೊಡಗು, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಅಬ್ಬರಿಸಿದೆ. ಈ ಬಾರಿ ನೈಋತ್ಯ ಮಾನ್ಸೂನ್ ಮೇ 19 ರ ಸುಮಾರಿಗೆ ದಕ್ಷಿಣ ಅಂಡಮಾನ್ ಸಮುದ್ರ, ಆಗ್ನೇಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳು ಮತ್ತು ನಿಕೋಬಾರ್ ದ್ವೀಪಗಳಲ್ಲಿ ಆಗಮಿಸಿ ಭಾರತದ ಇತರೆಡೆಗೆ ನಿಧಾನವಾಗಿ ಹಂಚಿಕೆಯಾಗುವ ಸಾಧ್ಯತೆಯಿದೆ. ಈ ಕುರಿತು ಭಾರತೀಯ ಹವಾಮಾನ ಇಲಾಖೆ( IMD) ಮುಂಗಾರು ಮಳೆ ಆರಂಭದ ಕುರಿತು ಮಾಹಿತಿ ಬಿಡುಗಡೆ ಮಾಡಿದೆ.
ಮೇ 19, 20 ಮತ್ತು 21 ರಂದು ಅಂಡಮಾನ್ ಸಮುದ್ರ ಪ್ರದೇಶದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಮಾದರಿಗಳು ಸೂಚಿಸುತ್ತಿವೆ. ಅಂಡಮಾನ್ ಪ್ರದೇಶವನ್ನು ತಲುಪಿದ ನಂತರ ಮಾನ್ಸೂನ್ ಕೇರಳವನ್ನು ತಲುಪಲು ಸಾಮಾನ್ಯವಾಗಿ ಸುಮಾರು 10 ದಿನಗಳನ್ನು ತೆಗೆದುಕೊಳ್ಳುತ್ತದೆ. ಈ ಬಾರಿಯೂ ಕರ್ನಾಟಕದಲ್ಲೂ ಬೇಗನೇ ಮುಂಗಾರು ಪ್ರವೇಶಿಸಬಹುದು. ಅದು ಮೇ ಕೊನೆಯ ವಾರದಲ್ಲಿಯೇ ಆಗಬಹುದು ಎನ್ನುವ ಅಂದಾಜಿದೆ ಎಂದು ಸ್ಕೈಮೆಟ್ ವೆದರ್ ನ ಮಹೇಶ್ ಪಲಾವತ್ ಹೇಳುತ್ತಾರೆ.